ಬ್ಯಾಬಿಲೋನಿಯನ್ ಕಲೆ

	ಸುಮೇರಿಯನ್, ಅಕ್ಯಾಡಿಯನ್, ಅಸ್ಸಿರಿಯನ್ ಮತ್ತು ಬ್ಯಾಬಿಲೋನಿಯನ್ ಕಲೆಗಳು ಪರಸ್ಪರ ಸಂಬಂಧವುಳ್ಳವು. ಇವು ಒಂದೇ ರೀತಿಯ ಧಾರ್ಮಿಕ ಸಂಬಂಧದ ಮೇಲೆ ಅವಲಂಬಿತವಾಗಿವೆ. ಬ್ಯಾಬಿಲೋನಿಯದ ಯುವರಾಣಿ ಸೆಮಿರಾನಮಿಸ್ಸಳನ್ನು ಅಸ್ಸಿರಿಯದ ರಾಜನಾದ ನಿಮ್ರಾಡಿಗೆ ಕೊಟ್ಟು ಮದುವೆಯಾಗಿತ್ತು. ಇವಳ ಸಹೋದರಿ ನಿಟೋಕ್ರಿಸ್ ಬ್ಯಾಬಿಲೋನಿಯದ ರಾಜ ನಬುನಾ ಇಡ್ಡಿನ ತಾಯಿ. ಈ ಬಗೆಯಲ್ಲೂ ಈ ರಾಜ್ಯಗಳಲ್ಲಿ ಒಂದಕ್ಕೊಂದು ಸಂಬಂಧವಿತ್ತು. ಆಮುಟ್ಟೈರು, ಅಕ್ಯಾಡಿಯನ್ನರು ಅಸ್ಸಿರಿಯನ್ನರು, ಬ್ಯಾಬಿಲೋನಿಯನ್ನರು ಒಂದೇ ಸೆಮಿಟಿಕ್ ಮೂಲವಂಶಕ್ಕೆ ಸೇರಿದವರು. ಅನಾದಿಯಿಂದ ಬಂದ ಸುಮೆರೀಯನ್ ಸಂಸ್ಕøತಿಯನ್ನೂ ಅವರವರ ಪ್ರಾದೇಶಿಕ ಸಂಪ್ರದಾಯಗಳನ್ನೂ ಇವರೆಲ್ಲ ಅವಲಂಬಿಸಿದ್ದರು. ಸುಮೇರಿಯನ್ನರು, ಅಕ್ಯಾಡಿಯನ್ನರು, ಬ್ಯಾಬಿಲೋನಿಯನ್ನರು ಮತ್ತು ಅಸ್ಸಿರಿಯನ್ನರು ಉಬ್ಬು ಕೆತ್ತಣ ಕೆಲಸದಲ್ಲೂ ಮಾರೀರಾಜ್ಯದವರು ಭಿತ್ತಿಚಿತ್ರಣದಲ್ಲೂ ಹೆಸರಾಗಿದ್ದರು. ಕಾಲಾಂತರದಲ್ಲಿ ಒಬ್ಬರು ಮತ್ತೊಬ್ಬರ ಮೇಲೆ ನಡೆಸಿದ ದಿಗ್ವಿಜಯದ ಪರಿಣಾಮವಾಗಿ ಈ ಕಲಾಕೃತಿಗಳು ಮೆಸೊಪೊಟೇಮಿಯ ಪ್ರದೇಶದಲ್ಲಿ ಒಂದು ರೀತಿಯ ಸಂಯೋಗ ಸಾಧಿಸಿದುವು. ಒಟ್ಟಿನಲ್ಲಿ, ಸುಮೆರೀಯನ್ನರ ಪ್ರಭಾವ ಸೆಮಿಟಿಕರ ಪ್ರಭಾವಕ್ಕಿಂತ ಹೆಚ್ಚಾಗಿದೆ. ಸುಮೇರಿಯನ್ನರು ಸೂರ್ಯನ ಆರಾಧಕರೆಂದೂ ಸೆಮೆಟಿಕ್ ಅಕ್ಯಾಡಿಯನರು ಚಂದ್ರನ ಭಕ್ತರೆಂದೂ ತಿಳಿದು ಬಂದಿದೆ. ಆದರೂ ಕಲಾಸೃಷ್ಟಿಯಲ್ಲಿ ಇದು ಅವರುಗಳ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ. ಇವರೆಲ್ಲರ ದೇವಸ್ಥಾನಗಳು ಒಂದೇ ನಮೂನೆಯ ಮೆಕ್ಸಿಕೋ ಆಜ್‍ಟೆಕ್ಕರ ಜಿಗ್ಗುರಾಟುಗಳ ಹೋಲಿಕೆಯಲ್ಲಿದ್ದುವು. ಸುಮೇರಿಯನ್ನರ ಸಂಸ್ಕøತಿಗೂ ನಿಕಟವಾದ ಸಂಬಂಧವಿದೆ. ಸುಮೇರಿಯನ್ನರ ಕಲೆ ಭಾರತದ ಕಲೆಯಂತೆ ಸಾಂಕೇತಿಕವಾದದ್ದು.

	ಅಕ್ಯಾಡಿಯನ್ನರ ವೈಭವ ಬ್ಯಾಬಿಲೋನಿಯದ ಹಮ್ಮುರಾಬಿ ಆಡಳಿತದಲ್ಲಿ ಅಭಿವೃದ್ಧಿಗೊಂಡಿತು. ಯೂಫ್ರೆಟಿಸ್ ತೀರದ ಪಟ್ಟಣವನ್ನು ಅದರ ಕಡೆಯ ರಾಜನಾದ ಜಿಂಗೀಲಿನಿಮ್‍ನಿಂದ ಹಮ್ಮುರಾಬಿ ಗೆದ್ದು ಅವನ ಅರಮನೆಯನ್ನೂ ಕಲಾಕೃತಿಗಳನ್ನೂ ನಾಶಮಾಡಿದ. ಆಗ ಸುಮೇರಿಯನ್ನರ ಚಂದ್ರ ದೇವಾಲಯ ಕೂಡ ನಾಶವಾಯಿತು. ಅಲ್ಲಿ ಸುಮೇರಿನ್ನರ ರಾಜನಾದ ನಾರಾಮ್ ಸಿನ್ ಸ್ಥಾಪಿಸಿದ್ದ ದಿಗ್ವಿಜಯದ ಉಬ್ಬುಕೆತ್ತನೆಯ ಶಾಸನವನ್ನೂ ನಾಶಪಡಿಸಿ ಅದರ ಬದಲು ತನ್ನದೇ ಆದ ಧರ್ಮಗಳನ್ನು ಪ್ರತಿಪಾದಿಸುವ ಶಿಲಾಶಾಸನವನ್ನು ಹಮ್ಮುರಾಬಿ ಸ್ಥಾಪಿಸಿದ. ಈ ಭಿತ್ತಿಚಿತ್ರಗಳಲ್ಲಿ ಕೆಲವು ಯಜ್ಞಶಿಲೆಗೆ ಕರೆದೊಯ್ಯುವ ಗೂಳಿಯ, ಜಲ ಮತ್ತು ಅಗ್ನಿಯ ಯಜ್ಞ, ಇಂದುದೇನಿ ರಾಜನಿಗೆ ಅಭಿಷೇಕ ಮಾಡುವುದು, ಈಜಿಪ್ಟಿನ ಚಿತ್ರಗಳನ್ನು ಹೋಲುವ ದೃಶ್ಯಗಳೇ ಮುಂತಾದಕಲಾಕೃತಿಗಳು ಸೇರಿವೆ. ಶಿರಸ್ತ್ರಾಣಕ್ಕೆ ಎರಡು ಕೊಂಬುಗಳುಳ್ಳ ಮತ್ತು ಕೈಗಳಲ್ಲಿ ಕುಂಭವನ್ನು ಧರಿಸಿದ ಇಷ್ಟಾರ್ ದೇವತೆ ಇಲ್ಲಿಯ ಪ್ರತಿಮೆಗಳ ಪೈಕಿ ಒಂದು.

	ಇಲ್ಲಿಯ ಚಿತ್ರಗಳಲ್ಲಿ ನೈಜತೆ, ಸರಳತೆ, ಭಾವದರ್ಶನ, ರೇಖಾವಿಲಾಸಗಳು ಮನೋಹರವಾಗಿವೆ. ಇವೆಲ್ಲ ಸುಮೆರಿಯನ್ನರ ಆಧ್ಯಾತ್ಮಿಕ ಸಾಂಕೇತಿಕಗಳು. ಸಿಂಹದೇಹದ ಗರುಡ ಪಕ್ಷಿ ಗಂಡು ಸಾರಂಗಗಳನ್ನು ಹಿಡಿದಿರುವುದು, ಮನುಷ್ಯ ಮುಖವನ್ನು ತಾಳಿದ ಹೋರಿಯ ಮೇಲಿನ ಸಿಂಹ ಮುಖದ ಪಕ್ಷಿ, ರಾಜ ಅಸುರ್ ಬಿನಿಪಾಲನ ಅಂತಃಪುರ ಮತ್ತು ಪ್ರತಿಮೆಗಳಿಂದಲೂ ಉಬ್ಬುಕೆತ್ತನೆಯಿಂದಲೂ ಕೂಡಿರುವ ಅದರ ಅಲಂಕಾರ ಮುಂತಾದವು ಹಮ್ಮುರಾಬಿ ಕಾಲದ ಅಕ್ಯಾಡಿಯನ್ನರ ವೈಭವ ಸೂಚಕಗಳಾಗಿವೆ.

	ಕ್ರಿ.ಪೂ. 2000ರಲ್ಲಿ ಬ್ಯಾಬಿಲೋನಿಯದ ಉತ್ತರ ಮತ್ತು ವಾಯವ್ಯ ದಿಕ್ಕುಗಳಲ್ಲಿದ್ದ ಜನರಿಂದ ಬ್ಯಾಬಿಲೋನ್ ರಾಜ್ಯಕ್ಕೆ ತೊಂದರೆ ಉಂಟಾಯಿತು. ಕ್ರಿ. ಪೂ. 1550-1169ರ ತನಕ ಬ್ಯಾಬಿಲೋನ್ ಕಾಶ್ಶೈಟರ ವಂಶದ ಆಡಳಿತದಲ್ಲಿತ್ತು. ಕ್ರಿ.ಪೂ.ಸು. 1000ದಲ್ಲಿ ಅಸ್ಸಿರಿಯನ್ನರ ಆಡಳಿತಕ್ಕೆ ಬಂದು, ಬ್ಯಾಬಿಲೋನಿಯನ್ ಕಲೆ ಪುನರ್ಜೀವ ಪಡೆಯಿತು. ಬ್ಯಾಬಿಲೋನಿಯನ್ ಪ್ರದೇಶದಲ್ಲಿ ಜೇಡಿಮಣ್ಣು ಎಷ್ಟು ಹೇರಳವೋ ಅಸ್ಸಿರಿಯದಲ್ಲಿ ಕಲ್ಲು ಅಷ್ಟು ಹೇರಳವಾಗಿತ್ತು. ಅಸ್ಸಿರಿಯನ್ನರು ದೇವಾಲಯ. ಅರಮನೆ ಕಟ್ಟಡಗಳಲ್ಲಿಯ ಭಿತ್ತಿಚಿತ್ರಗಳ ಮತ್ತು ಉಬ್ಬು ಕೆತ್ತನೆಯಲ್ಲಿ ನಿಪುಣರು. ಅವರ ಜೀವನ ವೈಭವಾಡಂಬರದಲ್ಲಿ ತೊಡಗಿದ್ದು ಆಡಳಿತ ಬೇಗ ನಶಿಸಿತು. ಬ್ಯಾಬಿಲೋನಿಯನ್, ಅಸ್ಸಿರಿಯನ್ನರು. ಪರ್ಷಿಯನ್ ರಾಜನಾದ ಸೈರಸ್ಸಿನಿಂದ (ಕ್ರಿ.ಪೂ. 3-10-538) ಪರಾಭವ ಹೊಂದುವತನಕ ಬ್ಯಾಬಿಲೋನಿಯ ರಾಜ್ಯ ಅತ್ಯಂತ ವಿಜೃಂಭಣೆಯಿಂದ ಮೆರೆಯಿತು. ಕಟ್ಟಡ ನಿರ್ಮಾಣದಲ್ಲಿ ಅದರ ಸುಮೇರಿಯನ್ ರೀತಿಯ ಅಲಂಕಾರದಲ್ಲಿ ಸುಮೇರಿಯ ಮತ್ತು ದಕ್ಷಿಣ ಅಕ್ಯಾಡಿಯನ್ನರಿಗಿಂತಲೂ ಹೆಚ್ಚಾದಶಕೌಲವನ್ನು ಅಸ್ಸಿರಿಯನರು ಸಾಧಿಸಿರುವುದು ಕಂಡುಬರುತ್ತದೆ. ಇವರ ದೃಷ್ಟಿ ವಿಶಿಷ್ಟ ರೂಪ ತಾಳಿದ್ದರೂ ಬ್ಯಾಬಿಲೋನಿಯನರ ಸಂಪ್ರದಾಯವನ್ನೇ ಮುಂದುವರಿಸಿದರು. ಚಿತ್ರಣದಲ್ಲಿ, ಅಂತಃಪುರ ಮಹಾದ್ವಾರಗಳಲ್ಲಿ, ಮಾನಸ್ತಂಭಗಳಲ್ಲಿ ಸುಮೇರಿಯನ್ ಅಕ್ಯಾಡಿಯನರ ಪುರಾಣ ಇತಿಹಾಸಗಳನ್ನು ಸಾಂಕೇತಿಕವಾಗಿ ಉಪಯೋಗಿಸಲಾಗಿದೆ. ಯುದ್ಧ ದೃಶ್ಯಗಳು, ಅರಮನೆಯ ಕ್ರೀಡಾವಿನೋದಗಳು, ಬೇಟೆಯ ಚಟುವಟಿಕೆಗಳು ಚಿತ್ರಗಳಲ್ಲಿ ವಿಪುಲವಾಗಿವೆ.

	ಕ್ರಿ.ಪೂ. 689ರಲ್ಲಿ ಸೆನ್‍ಚರಿಚ್‍ನಿಂದ ಬ್ಯಾಬಿಲೋನಿಯ ನಾಶವಾದರೂ ಅವನ ತರುವಾಯ ಬಂದ ನೆಬೋಪೋಲಜ್ಬ್ ಮತ್ತು ಇವನ ಮಗನಾದ ನೆಬೊಛಡ್ ನಾಜûದ್ ಇವರುಗಳಿಂದ ಪುನಃ ಜೀರ್ನೋದ್ಧಾರವಾಯಿತು. ಕಲಾ ಔನ್ನತ್ಯಕ್ಕೇರಿತು. ಬ್ಯಾಬಿಲೋನಿನ ಮರ್ದೂ ದೇವಾಲಯದ ಅವರಣದಲ್ಲಿ ಸುಮೇರಿಯನ್ನರ ಜಿಗ್ಗುರಾಟಗಳಂತೆ ನಿಮಿರ್ತವಾದ 7 ಅಂತಸ್ತಿನ ದೇವಾಲಯ, ಅದರ ಗೋಡೆಗಳ ಮೇಲೆ ಸುಟ್ಟ ಹಂಚುಗಳಿಂದ ಹಾಸಲಾದ ಸುಂದರವಾಗಿ ಚಿತ್ರಿಸಿದ ಸಿಂಹಗಳ ಶ್ರೇಣಿಗಳೂ ಇಷ್ಟಾರ್ ದೇವಾಲಯದ ಮುಖದಲ್ಲಿ ಘೋರ ಸರ್ಪಗಳ ಮಧ್ಯೆ ಹೋರಿಗಳ ರೂಪಾಲಂಕಾರ, ಮತ್ತಿತರ ದೇವಾಲಯಗಳು, ಅರಮನೆಗಳು ಮತ್ತು ಅವುಗಳ ಮೇಲ್ಮಟ್ಟದ ಶೃಂಗಾರವೆಲ್ಲ ಚಿರಸ್ಮರಣೀಯವಾಗಿವೆ. ಬ್ಯಾಬಿಲೋನಿಯಾ ಅಸಿರಿಯನ್ನರ ವೈಭವಕ್ಕೆ ಇವು ಪ್ರತೀಕಗಳು. ಚಿತ್ರಣದಲ್ಲಿ ಉಪಯೋಗಿಸಿದ ಬಣ್ಣಗಳು ಲೋಹಧಾತುಗಳು-ಅರಿಶಿನ, ಅತಿರಕ್ತ ಮತ್ತು ಶ್ವೇತ ಚಿತ್ರಗಳು ಪರಸ್ಪರ ಖಚಿತವಾದವು.

	ಅಸ್ಸಿರಿಯನ್ ಬ್ಯಾಬಿಲೋನಿಯನ್ನರ ಕಲೆಯಲ್ಲಿ ಅಂಗಸಂಯೋಗ ಪರಿಮಾಣ, ರೂಪಗಳ ವಿವರಣೆ, ಬಣ್ಣಿಸಿದ ರೂಪಗಳಿಗೂ ಖಾಲಿ ಜಾಗಗಳಿಗೂ ಇರುವ ಸೂಕ್ಷ್ಮ ಸಂಬಂಧ, ಉಡುಪುಗಳಲ್ಲಿ, ಒಡವೆಗಳಲ್ಲಿ ಪ್ರತ್ಯೇಕಿಸಲಾದ ರೇಖಾಲಂಕಾರ, ದೈಹಿಕವರ್ಣನೆ (ಹಣೆಯ ಸುಕ್ಕುಗಳು, ಹಸ್ತರೇಖೆಗಳು ಮುಂತಾದವು) ಗಮನಾರ್ಹವಾದವು. ಇವರ ಕಲಾಧೋರಣೆ ಮತ್ತು, ಉದ್ಯೋಗದಲ್ಲಿ ನಿಷ್ಠೆ ಮತ್ತು ಘನತೆ ಕಂಡುಬರುತ್ತವೆ. 2ನೆಯ ಹಸುರ್ ನಾಸಿರ್ ಪಾಲಿನ ಅಂತಃಪುರದಲ್ಲಿ ಪಕ್ಷಿಸಹಿವಾದ ರಾಜನ ಅರ್ಚನೆಯ ಚಿತ್ರ, ಮತ್ತು ಟೆಲ್ ಹಲೀಫ್ ಅಂತಃಪುರದ ವಿವಿಧ ರೂಪದ ಚಿತ್ರವನ್ನು ಹೋಲುವ (ಕ್ರಿ.ಪೂ. 3400-2600,) ಹಿಟ್ಟೈಟರ ವಿವಿಧಾಕೃತಿಯ ಭಿತ್ತಿಚಿತ್ರ ಮುಂತಾದವನ್ನು ಗಮನಿಸಬಹುದು. ರಾಜರ ರೂಪಗಳಿಗೂ ಗುರು ರೂಪಗಳಿಗೂ ರೆಕ್ಕೆಗಳಿದ್ದು ಅವರ ಬೆರಳುಗಳು ಸಾಂಪ್ರದಾಯಿಕ ಮುದ್ರೆಗಳನ್ನು ತಾಳಿವೆ. ನರಸಿಂಹಾವತಾರದಂತೆ ರಾಜರ ದೈಹಿಕ ಸ್ವರೂಪ ಅಥವಾ ವೃಷಭದೇಹವನ್ನು ತಾಳಿದ ರೆಕ್ಕೆಗಳ ಮಾನುಷರೂಪಗಳು ರಮಣೀಯವಾಗಿ ರಚಿಸಲಾಗಿವೆ. ಆಸ್ಸಿರಿಯನ್ ಬ್ಯಾಬಿಲೋನಿಯನ್ನರ ಸಂಪ್ರದಾಯದಲ್ಲಿ ಉಬ್ಬಿರುವ ಕೆತ್ತನೆಯ ಕೆಲಸ ಹೆಚ್ಚಾಗಿರುತ್ತದೆ. ಗುಂಡುಗುಂಡಾದ ಶಿಲ್ಪ ಅತಿಸ್ವಲ್ಪ. ಇವುಗಳಲ್ಲಿ ಶಕ್ತಿಯುತವಾದ ತೀವ್ರತೆ ಹಿಂಸಾತ್ಮಕ ದೃಷ್ಟಿ, ಚೈತನ್ಯ ಪುಷ್ಕಳವಾಗಿರುತ್ತದೆ. ಉದಾಹರಣಗೆಗೆ ನಿಮ್ರಾಡಿನ ಬೇಟೆ; ರಾಜ ಅಸುರ್ ಬಣಿಪಾಲಿಗೆ ಪುರೋಹಿತರು ಮತ್ತಿತರ ಕುಲೀನರು ಅರ್ಪಿಸುವ ಕಾಣಿಕೆಗಳ ಶ್ರೇಣಿಗಳು ವಿರರ ಬೇಟೆ ಇತ್ಯಾದಿ. ಬ್ಯಾಬಿಲೋನ್ ರಾಜ್ಯ ನಾಶವಾದರೂ ಅದರ ಕಲಾಪ್ರಭಾವ ಮುಂದುವರಿಯಿತು. ಸುಸಾ ಮತ್ತು ಪರ್ಸಿಪೋಲಿಸುಗಳಲ್ಲಿಯೂ ಪರ್ಷಿಯನ್ನರ ಅಂತಃಪುರಗಳು ಗ್ರೀಕ್ ಶಿಲ್ಪಿಗಳಿಂದ ಕಟ್ಟಲಾಗಿದ್ದರೂ ಅವುಗಳಲ್ಲಿಯ ಒಳಶೃಂಗಾರ ಬ್ಯಾಬಿಲೋನಿಯನ್ನರಿಂದ ನಿರ್ಮಿಸಲಾಗಿತ್ತು ಎಂಬುದು ಗಮನಾರ್ಹ.
(ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ